Media Mentions: ಕೋವಿಡ್‌ ಜ್ಞಾನ್‌ ಬಹುಸಾಂಸ್ಥಿಕ ವೆಬ್‌ ತಾಣದ ಅನಾವರಣ

ಏಪ್ರಿಲ್‌ 3rd, 2020

ಸಂಕಷ್ಟದ ನಟ್ಟ ನಡುವೆ

ಕೋವಿಡ್‌ - 19 ಸಾಂಕ್ರಾಮಿಕ ರೋಗ ಹಿಂದೆಂದೂ ಕಂಡರಿಯದಂಥದ್ದು. ಈಗಾಗಲೇ ಈ ಸೋಂಕು ಹತ್ತು ಲಕ್ಷಕ್ಕೂ ಮೀರಿದ ಜನರನ್ನು ಸೋಂಕಿರುವುದು ಖಚಿತವಾಗಿದೆ. ನಿಜವಾದ ಸಂಖ್ಯೆ ಇನ್ನೂ ಹೆಚ್ಚಿರಲೂ ಬಹುದು. ಈ ದುರಂತದ ಮುಂಚೂಣಿಯಲ್ಲಿ ನಿಂತು ವೈದ್ಯರುಗಳು, ದಾಯಿಗಳು ಹಾಗೂ ಇತರೆ ಆರೋಗ್ಯ ಸಿಬ್ಬಂದಿ ಹೋರಾಡುತ್ತಿದ್ದಾರೆ. ಇವರಿಗೆ ಬೆನ್ನೆಲುಬಾಗಿ ಸಹಸ್ರಾರು ವಿಜ್ಞಾನಿಗಳು ಹಾಗೂ ಇಂಜಿನೀಯರುಗಳು ಕೈಜೋಡಿಸಿ ನಿಂತಿದ್ದಾರೆ. ಇದುವೂ ಕೂಡ ಈ ಹಿಂದೆಂದೂ ಕಂಡು ಕೇಳದ ವಿದ್ಯಮಾನ. ಇವರೆಲ್ಲರೂ ಕೊರೊನಾ ವೈರಸ್ಸಿನ ನಡವಳಿಕೆ, ಸೋಂಕು ಹರಡುವ ಪರಿ, ರೋಗಪತ್ತೆ, ಹಾಗೂ ದೈಹಿಕವಾಗಿ ಒಬ್ಬರಿಂದೊಬ್ಬರು ದೂರ ಕಾಯ್ದುಕೊಳ್ಳುವುದನ್ನು ಬೃಹತ್‌ ಪ್ರಮಾಣದಲ್ಲಿ ಸಾಧಿಸಲು ಹಾಗೂ ಮಾಹಿತಿಗಳನ್ನು ಸಂವಹಿಸಲು ಮತ್ತು ವಿಶ್ಲೇಷಿಸಲು ವಿನೂತನ ವಿಧಾನಗಳನ್ನು ಬಳಸಲು ಇವೆರೆಲ್ಲರೂ ಶ್ರಮಿಸುತ್ತಿದ್ದಾರೆ.

ಕೋವಿಡ್‌ ಜ್ಞಾನ್‌ ಎಂದರೇನು?
ಈ ಸೋಂಕಿನ ಬಗ್ಗೆ ಪ್ರಪಂಚದ ಮೂಲೆ, ಮೂಲೆಗಳಿಂದಲೂ  ಮಾಹಿತಿಯ ಮಹಾಪೂರವೇ ಹರಿದು ಬರುತ್ತಿದೆ. ಇವುಗಳಲ್ಲಿ ವಿಶ್ವಾಸಾರ್ಹವಾದದ್ದನ್ನು ಉಳಿಸಿಕೊಂಡು, ಉಳಿದದ್ದನ್ನು ಸೋಸಿ ಕಳೇದು ಅರ್ಥ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲು. ಕೋವಿಡ್‌ ಜ್ಞಾನ್‌ ಎನ್ನುವ ಬಹು ಸಾಂಸ್ಥಿಕ ಹಾಗೂ ಬಹು ಭಾಷಿಕ ವೆಬ್‌ ತಾಣವನ್ನು ಈ ಸವಾಲನ್ನು ಎದುರಿಸಲೆಂದೇ ಸೃಷ್ಟಿಸಲಾಗಿದೆ. ಇದು ಟಾಟಾ ಇನ್ಸಟಿಟ್ಯೂಟ್ ಆಫ್‌ ಫಂಡಮೆಂಟಲ್‌ ರೀಸರ್ಚ್‌ (ಟಿಐಎಫ್‌ಆರ್‌ - TIFR), ಭಾರತೀಯ ವಿಜ್ಞಾನ ಸಂಸ್ಥೇ (ಇಂಡಿಯನ್‌ ಇನ್ಸಟಿಟ್ಯೂಟ್‌ ಆಫ್‌ ಸೈನ್ಸ್‌ - IISc) ಮತ್ತು ಟಾಟಾ ಮೆಮೋರಿಯಲ್‌ ಸೆಂಟರ್‌ (TMC – ಟಿಎಂಸಿ) ಸಂಸ್ಥೆಗಳ ಜಂಟಿ ಪ್ರಯತ್ನ. ಇದರಲ್ಲಿ ವಿಜ್ಞಾನ್‌ ಪ್ರಸಾರ್‌, ಇಂಡಿಯಾಬಯೋಸೈನ್ಸ್‌ ಹಾಗೂ ಬೆಂಗಳೂರು ಲೈಫ್‌ ಸೈನ್ಸಸ್‌ ಕ್ಲಸ್ಟರ್‌ (BLiSc.ಇದರಲ್ಲಿ ಟಿಐಎಫ್‌ಆರಿನ ಎನ್‌ ಸಿ ಬಿ ಎಸ್‌ -NCBS- InSTEM ಹಾಗೂ CCAMP ಸೇರಿವೆ.)  ಈ ಪ್ರಯತ್ನದ ಫಲವಾಗಿ ಕೋವಿಡ್‌ ಜ್ಞಾನ್‌ ಎನ್ನುವ ಜಾಲತಾಣ ಸೃಷ್ಟಿಯಾಗಿದೆ. ಇದನ್ನು ಇಲ್ಲಿ ನೋಡಬಹುದು.https://covid-gyan.in. ಕೋವಿಡ್‌ ಸೋಂಕಿನ ಬಗ್ಗೆ ಇರುವ ತಪ್ಪು ಮಾಹಿತಿಗಳನ್ನು ಸರಿಪಡಿಸುವಂತಹ ವಾಸ್ತವಾಂಶಗಳನ್ನು ಈ ತಾಣದಲ್ಲಿ ಕಾಣಬಹುದು.

Infographics that address rumours and provide factual data can be found on the site.

ಕೋವಿಡ್‌ ಜ್ಞಾನ್‌ ಬಗ್ಗೆ ವಿಜ್ಞಾನಿಗಳು ಏನೆನ್ನುತ್ತಾರೆ?

ಪ್ರೊಫೆಸರ್‌ ರಾಜೇಶ್‌ ಗೋಪಕುಮಾರ್‌ ಈ ಪ್ರಯತ್ನದ ಸಂಚಾಲಕರು. ಇವರು ಬೆಂಗಳೂರಿನ ಇಂಟರ್ನ್ಯಾಶನಲ್‌ ಸೆಂಟರ್‌ ಫಾರ್‌ ಥಿಯರೆಟಿಕಲ್‌ ಫಿಸಿಕ್ಸ್‌ ಸಂಸ್ಥೆಯ ನಿರ್ದೇಶಕರು. ಗೋಪಕುಮಾರ್‌ ಅವರ ಪ್ರಕಾರ “ಕೋವಿಡ್‌ - 19 ಕುರಿತು ವೈಜ್ಞಾನಿಕವಾಗಿ ವಿಶ್ವಾಸಾರ್ಹವಾದ ಹಾಗೂ ಅಧಿಕೃತ ಮಾಹಿತಿಯನ್ನು ಸೃಷ್ಟಿಸಿ, ತಿದ್ದಿ, ಸಂವಹಿಸುವುದು” ಕೋವಿಡ್‌ ಜ್ಞಾನ್‌ ಜಾಲತಾಣದ ಉದ್ದೇಶ. ಈ ಜಾಲತಾಣದ ಗುರಿ ಮುಖ್ಯವಾಗಿ ಸಾಮಾನ್ಯ ಜನತೆ ಹಾಗೂ ಕೋವಿಡ್‌ -19 ರ ಬಗ್ಗೆ ಹೊಸತನ್ನು ತಿಳಿದುಕೊಳ್ಳುವ ಆಸಕ್ತರು ಎಂದು ಅವರು ಒತ್ತಿ ಹೇಳುತ್ತಾರೆ.
 
ನ್ಯಾಶನಲ್‌ ಸೆಂಟರ್‌ ಫಾರ್‌ ಬಯಾಲಾಜಿಕಲ್‌ ಸೈನ್ಸಸಿನ ಕೇಂದ್ರೀಯ ನಿರ್ದೇಶಕರಾದ ಪ್ರೊ ಸತ್ಯಜಿತ್‌ ಮೇಯರ್‌ ವೈರಸ್ಸುಗಳಿಂದ ಹಿಡಿದು ನಾವು ನೆಲೆಸಿರುವ ಪರಿಸರಗಳ ಜೀವಿವಿಜ್ಞಾನದ ಕುರಿತು ಎಲ್ಲ ಸ್ತರದಲ್ಲಿಯೂ ಬೇಕಾದ ಮಾಹಿತಿ, ಪರಿಣತಿ ಹಾಗೂ ಅನುಭವ ಎನ್‌ ಸಿ ಬಿ ಎಸ್ಸಿನಲ್ಲಿ ಇದೆ. “ಕೋವಿಡ್-‌19 ರ ಈ ಸಂಕಟ ಸಮಯದಲ್ಲಿ ನಾವು ಜೀವಿಪ್ರಪಂಚದ ಬಗ್ಗೆ ನಮಗಿರುವ ಆಳವಾದ ವೈಜ್ಞಾನಿಕ ತಿಳಿವನ್ನು ಈಗ ನಾವಿರುವ ಪರಿಸ್ಥಿತಿಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಬಳಸಿಕೊಳ್ಳಬೇಕಲ್ಲದೆ, ಈ ಸಂಕಟಕ್ಕೆ ಸೂಕ್ತವಾದ ಪರಿಹಾರ ಮಾರ್ಗಗಳನ್ನೂ ಹುಡುಕಬೇಕಾಗಿದೆ,” ಎಂದು ನುಡಿದರು.

 ಟಿಐಎಫ್‌ಆರ್‌ ಸಂಸ್ಥೆಯ ಮುಂಬೈ ಕೇಂದ್ರದ ಚಾಯ್‌ ಅಂಡ್‌ ವೈ ಜನಪ್ರಿಯ ವಿಜ್ಞಾನ ಕಾರ್ಯಕ್ರಮದ ರೂವಾರಿಗಳಾದ  ಪ್ರೊ. ಅರ್ನಬ್‌ ಭಟ್ಟಾಚಾರ್ಯ “ಕೋವಿಡ್‌ - 19 ಬಗ್ಗೆ ಇಂದು ಇನ್ಫೋಡೆಮಿಕ್‌ ಅರ್ಥಾತ್‌ ಸುಳ್ಳುಸುದ್ದಿಯ ಸಾಂಕ್ರಾಮಿಕವಾಗಿರುವ  ಸಂದರ್ಭದಲ್ಲಿ ನಂಬಲರ್ಹವಾದ ವೈಜ್ಞಾನಿಕ ಮಾಹಿತಿಯನ್ನು ಒದಗಿಸುವುದು ಅತ್ಯಾವಶ್ಯಕ. ಇದನ್ನು ನಾವು ಇಂದು ಕಡೆಗಣಿಸಿದರೆ ಜಾಗತಿಕ ಹವಾಗುಣ ಬದಲಾವಣೆಯ ವಿಷಯದಲ್ಲಿ ಆದಂತೆಯೇ ವಿಶ್ವಾದ್ಯಂತ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಹೀಗಾಗಿ ಕೋವಿಡ್‌ ಜ್ಞಾನ್‌ ಎನ್ನುವುದು ದೇಶದ ಎಲ್ಲೆಡೆಯಲ್ಲಿರುವ ವಿಜ್ಞಾನಿಗಳು ಜೊತೆಗೂಡಿ, ಹಲವಾರು ಭಾರತೀಯ ಭಾಷೆಗಳಲ್ಲಿ ಈ ಮಾಹಿತಿಯನ್ನು ಕಟ್ಟುವುದಕ್ಕೆ ಹೂಡಿರುವ ಪ್ರಯತ್ನ.” ಎನ್ನುತ್ತಾರೆ.

ಇದು ಇಂದಿನ ತುರ್ತು ಎಂದು ಹೇಳುವ ಟಿಐಎಫ್‌ಆರ್‌ ಹೈದರಾಬಾದ್‌ ಕೇಂದ್ರದ ನಿರ್ದೇಶಕರಾದ ಪ್ರೊ. ವಿ. ಚಂದ್ರಶೇಖರ್‌ ಕೋವಿಡ್‌ - 19 ಪ್ರಪಂಚದೆಲ್ಲಡೆ ಹಲವು ದೇಶಗಳನ್ನು ಬಾಧಿಸುತ್ತಿದೆ. ಹೀಗಾಗಿ ವಿಜ್ಞಾನಿಗಳ ಸಮುದಾಯವು ಹಲವು ನಿಟ್ಟಿನಲ್ಲಿ ಕೈ ಜೋಡಿಸಿ ಕೆಲಸ ಮಾಡಬೇಕಾದ ಸಂದರ್ಭ ಒದಗಿದೆ. ಈ ನಿಟ್ಟಿನಲ್ಲಿ  ಟಿಐಎಫ್‌ಆರ್‌ ಸಮೂಹದ ಇತರೆ ಸಂಸ್ಥೆಗಳ ಜೊತೆಗೆ ಹೈದರಾಬಾದ್‌ ಕೇಂದ್ರ ವಿಜ್ಞಾನಿಗಳು ಜೊತೆಯಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.
 
ಮುಂಬಯಿಯ ಹೋಮಿ ಭಾಭಾ ಸೆಂಟರ್‌ ಫಾರ್‌ ಸೈನ್ಸ್‌ ಎಜುಕೇಶನ್‌ ಸಂಸ್ಥೆಯ ನಿರ್ದೇಶಕರಾದ ಪ್ರೊ. ಕೆ. ಸುಬ್ರಮಣ್ಯಂ  ಕೋವಿಡ್‌ ಜ್ಞಾನ್‌ ಪ್ರಯತ್ನದಲ್ಲಿ ತೊಡಗಿರುವ ಸಂಸ್ಥೇಗಳಲ್ಲಿ ಸಂಶೋಧನೆ, ವಿಜ್ಞಾನ ಸಂವಹನ, ವಿಜ್ಞಾನ ಶಿಕ್ಷಣ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅನುಭವ ಮತ್ತು ಪರಿಣತಿ ಇದೆ. ಈ ಎಲ್ಲ ಸಂಸ್ಥೆಗಳ ಸಾಮರ್ಥ್ಯಗಳೂ ಒಟ್ಟುಗೂಡಿ, ಅಧಿಕೃತ ಹಾಗೂ ನಂಬಲರ್ಹ ಮಾಹಿತಿಯನ್ನು ಜನತೆಗೆ ಹಾಗೂ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ವಿವಿಧ ಪಾತ್ರಗಳಲ್ಲಿ ತೊಡಗಿಕೊಂಡಿರುವವರೆಲ್ಲರಿಗೂ ತಲುಪಿಸಬಹುದು. ಈ ವೈಜ್ಞಾನಿಕ ಮಾಹಿತಿ ನಂಬಲರ್ಹವಾಗಿರುವುದರ ಜೊತೆಗೇ ನಮ್ಮ ದೇಶದಲ್ಲಿ ಇರುವ ಜಟಿಲ ಸಮಸ್ಯೆಗಳನ್ನೂ ಪರಿಗಣಿಸುವಂಥದ್ದಾಗಿರಬೇಕು ಎನ್ನುತ್ತಾರೆ. 
 
ಟಿಐಎಫ್‌ಆರ್‌ ನ ಥಿಯರೆಟಿಕಲ್‌ ಫಿಸಿಕ್ಸ್‌ ವಿಭಾಗದ ಪ್ರೊ. ಅಮೋಲ್‌ ದಿಘೆಯವರ ಪ್ರಕಾರ ಕೋವಿಡ್‌-19 ಪ್ರತಿ ವ್ಯಕ್ತಿಯನ್ನು ಒಂದಲ್ಲ ಒಂದು ಬಗೆಯಲ್ಲಿ ಬಾಧಿಸುತ್ತಿದೆಯಾದ್ದರಿಂದ ಅದರೊಂದಿಗಿನ ಹೋರಾಟ ವೈದ್ಕರ ಮಟ್ಟದಲ್ಲಷ್ಟೆ ಅಲ್ಲ ಸಾಮಾಜಿಕ ಹೋರಾಟವೂ ಆಗಿದೆ. ಆದ್ದರಿಂದಲೇ ಸಮಾಜದ ಎಲ್ಲ ಸ್ತರದ ವ್ಯಕ್ತಿಗಳಿಗೂ ವಿಶ್ವಾಸಾರ್ಹವಾದ ಮಾಹಿತಿ ಅವರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ದೊರಕುವುದು ಮುಖ್ಯ. ಕೋವಿಡ್‌ ಜ್ಞಾನ್‌ ಇಂತಹ ಸಂಪನ್ಮೂಲಗಳನ್ನು ಎಷ್ಟು ಭಾರತೀಯ ಭಾಷೆಗಳಲ್ಲಿ ಸಾಧ್ಯವೋ ಅಷ್ಟರಲ್ಲಿಯೂ ಒದಗಿಸಲಿದ್ದು, ವಿಜ್ಞಾನ ಹಾಗೂ ಆರೋಗ್ಯ ಮತ್ತು ಸ್ವಾಸ್ಥ್ಯ ಕುರಿತ ಮಾಹಿತಿ ಎಷ್ಟು ವ್ಯಾಪಕವಾಗಿ ಜನರಿಗೆ ದೊರೆಯುವುದೋ ಅಷ್ಟೂ ಒಳ್ಳೆಯದು.

 

ಇಂಡಿಯಾ ಬಯೋ ಸೈನ್ಸಿನ ಕಾರ್ಯನಿರ್ವಾಹಕ ನಿರ್ದೇಶಕಿಯಾದ ಡಾ. ಸ್ಮಿತಾ ಜೈನ್‌ ಕೋವಿಡ್‌ ಜ್ಞಾನ್‌ ಎನ್ನುವುದು ಈ ಪಾಲುದಾರ ಸಂಸ್ಥೆಗಳಲ್ಲಿ ಕಾರ್ಯನಿರತರಾಗಿರುವ ವಿಜ್ಞಾನಿಗಳು ಒದಗಿಸಿದ ಖಚಿತವಾದ ಹಾಗೂ ತಿದ್ದಿದ ಮಾಹಿತಿಗಳ ಆಕರ. ಇಂಡಿಯಾ ಬಯೋ ಸೈನ್ಸ್‌ ತಾಣವು ಓದುಗರಿಗೆ ಸ್ವಾರಸ್ಯಕರವಾದ ಹಾಗೂ ಇತ್ತೀಚಿನ ಸುದ್ದಿ, ಅಂಕಣಗಳು ಹಾಗೂ ಲೇಖನಗಳನ್ನು ಒದಗಿಸುತ್ತಾ ಬಂದಿದೆ. ಕೋವಿಡ್‌ ಜ್ಞಾನ್‌ ಪ್ರಯತ್ನದಲ್ಲಿ ಪಾಲ್ಗೊಳ್ಳುವ ಮೂಲಕ ಅದು ಸಂಕಟ ಸಮಯದಲ್ಲಿ ಇನ್ನೂ ಹೆಚ್ಚಿನ ಜನರಿಗೆ ಅತ್ಯುತ್ತಮ ಮಾಹಿತಿಯನ್ನು ಒದಗಿಸಲು ನೆರವಾಗಲಿದೆ ಎನ್ನುತ್ತಾರೆ.

ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸಿನ ಸಂವಹನ ವಿಭಾಗದ ಪ್ರೊ. ಕೌಶಲ್‌ ವರ್ಮ ಅವರ ಪ್ರಕಾರ ಕೋವಿಡ್‌ ಜ್ಞಾನ್‌ ಎನ್ನುವುದು ಮುಂಬರುವ ದಿನಗಳಲ್ಲಿ ಕೋವಿಡ್‌ -19 ಸೋಂಕಿನ ಬಗ್ಗೆ ನಂಬಲರ್ಹವಾದ ಮಾಹಿತಿಗಳ ಆಕರವಾಗಿ ಬೆಳೆಯಲಿದೆ.

ಈ ನಿಟ್ಟಿನಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ವಿಜ್ಞಾನಿಗಳು ನಿರ್ವಹಿಸಲಿದ್ದಾರೆ ಎಂದು ಒತ್ತಿ ಹೇಳಿದರು. ಮೊದಲನೆಯದಾಗಿ ಲಸಿಕೆಗಳು ಮತ್ತು ಚಿಕಿತ್ಸೆಯ ಶೋಧ ಹಾಗೂ ವಿಜ್ಞಾನಾಧಾರಿತ ನೀತಿ, ನಿಯಮಗಳನ್ನು ಜಾರಿಗೆ ತರುವುದು ಹಾಗೂ ಈ ವಿಷಯಗಳನ್ನು ಎಲ್ಲರಿಗೂ ಅರ್ಥವಾಗುವಂತೆ ತಿಳಿ ಹೇಳುವುದು ಎರಡೂ ವಿಜ್ಞಾನಿಗಳ ಹೊಣೆಗಾರಿದೆ. ಟಿಐಎಫ್‌ಆರ್‌ ಹಾಗೂ ಇತರೆ ಭಾಗಿ ಸಂಸ್ಥೇಗಳ ವಿಜ್ಞಾನಿಗಳು ಮತ್ತು ಸಂವಾಹಕರನ್ನು ಒಟ್ಟುಗೂಡುವಂತೆ ಒಂದು ರಂಗವನ್ನು ಒದಗಿಸುವ ಮೂಲಕ ಅವರ ಕಾರ್ಯವನ್ನು ಕೋವಿಡ್‌ ಜ್ಞಾನ್‌ ಇನ್ನಷ್ಟು ಪ್ರಭಾವಿಯಾಗಿಸಲಿದೆ.

ಕೋವಿಡ್‌ ಜ್ಞಾನ್‌ ಜಾಲತಾಣದಲ್ಲಿ ಚುಟುಕಾದ ಮಾಹಿತಿಪೂರ್ಣ ವೀಡಿಯೋಗಳು, ಭಿತ್ತಿಪತ್ರಗಳು, ಮಾಹಿತಿಚಿತ್ರಗಳು, ಪ್ರಶ್ನೋತ್ತರಗಳು, ತಪ್ಪು ನಂಬಿಕೆಗಳನ್ನು ಸರಿಪಡಿಸುವಂತಹ ಚುಟುಕು ಮಾಹಿತಿ ಮತ್ತು ಲೇಖನಗಳು ಇರುತ್ತವೆ. ಇವನ್ನು ಶೀಘ್ರವೇ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಒದಗಿಸಲಾಗುವುದು. ಇನ್ನೂ ಬೇರೆ ಭಾಷೆಗಳಲ್ಲಿ ಮಾಹಿತಿ ಬೇಕಿದ್ದರೆ ಕೆಲವು ದಿನಗಳ ನಂತರ ಮತ್ತೆ ಇಲ್ಲಿಗೆ ಬನ್ನಿ.
 
ಜಾಲತಾಣ: https://covid-gyan.in 
12 ಭಾಷೆಗಳಲ್ಲಿ ವೀಡಿಯೋಗಳು: https://covid-gyan.in/videos  
 
ಸಂಪರ್ಕಿಸಿ: contact@covid-gyan.in